December 23, 2024

ವಂಚಕ ವಿಜಯ್ ತಾತಾ ವಿರುದ್ಧ ತನಿಖೆಗೆ ಎಸ್ ಐಟಿ ತಂಡ ರಚಿಸಿ ; ರಮೇಶ್ ಗೌಡ

ಬೆಂಗಳೂರು : ವಂಚಕ ವಿಜಯ್ ತಾತಾನಿಂದ ಅನೇಕರಿಗೆ ಮೋಸವಾಗಿದ್ದು, ಮೋಸ ಹೋದವರಿಗೆ ನ್ಯಾಯ ಕೊಡಿಸಲು ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ, ಮಾಜಿ ಶಾಸಕ ಹೆಚ್.ಎಂ.ರಮೇಶ್ ಗೌಡ ಆಗ್ರಹ ಮಾಡಿದರು.

ನಗರದ ಪಕ್ಷದ ಕಚೇರಿಯಲ್ಲಿ ಸಂಸದ ಮಲ್ಲೇಶ್ ಬಾಬು, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ, ಟಿ.ಎ
ಶರವಣ, ಜವರಾಯಿಗೌಡ ಸೇರಿ ಪಕ್ಷದ ವಿವಿಧ ಮುಖಂಡರ ಜತೆ ಜಂಟಿ ಮಾಧ್ಯಮಗೋಷ್ಠಿ ನಡೆಸಿದ ಅವರು ಆಗ್ರಹಿಸಿದರು.

ಅನೇಕರಿಗೆ ವಿಜಯ್ ತಾತಾ ಮೋಸ ಮಾಡಿದ್ದಾನೆ. ಆತನ ವಿರುದ್ಧ ನೂರಾರು ಪ್ರಕರಣಗಳು ದಾಖಲಾಗಿವೆ. ವಂಚನೆಯೇ ಆತನ ಪ್ರವೃತ್ತಿ ಆಗಿದ್ದು, ವಿಶೇಷ ತನಿಖೆ ನಡೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಅಲ್ಲದೆ; ರಾಜ್ಯದ ಆಂತರಿಕ ಭದ್ರತಾ ವಿಭಾಗದಿಂದ ನನ್ನ ಫೋನ್ ಕದ್ದಾಲಿಕೆ ಆಗುತ್ತಿದೆ. ಪೊಲೀಸ್ ಆಯುಕ್ತರಿಗೆ ನಾನು ದೂರು ನೀಡುತ್ತೇನೆ. ಈ ಬಗ್ಗೆಯೂ ತನಿಖೆ ನಡೆಯಬೇಕು ಎಂದು ರಮೇಶ್ ಗೌಡ ಆಗ್ರಹಿಸಿದರು.

ಪೊಲೀಸ್ ಠಾಣೆಯಲ್ಲಿ ಸ್ವತಃ ವಿಜಯ್ ತಾತಾನೇ ನನಗೆ ಹೇಳಿದ್ದಾರೆ. ಕುಮಾರಸ್ವಾಮಿ ಮತ್ತು ನಿಮ್ಮ ಮೇಲೆ ಕೇಸು ದಾಖಲಿಸಲು ನನ್ನ ಮೇಲೆ‌ ಸಿಎಂ‌‌ ಕಚೇರಿ ಹಾಗೂ ಕೆಲ ಸಚಿವರ ಒತ್ತಡ ಇದೆ ಎಂದು ಹೇಳಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಲಿ ಎಂದು ಅವರು ಒತ್ತಾಯಿಸಿದರು.

ಕುಮಾರಸ್ವಾಮಿ ಅವರು ಹಾಗೂ ನನ್ನ ಮೇಲೆ ವಿಜಯ್ ತಾತಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದಾದ ಮೇಲೆ ನಾನು ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ಕೊಡಲು ಹೋದಾಗ ವಿಜಯ್ ತಾತಾ ಆ ಠಾಣೆಯಲ್ಲಿಯೇ ಇದ್ದರು. ನಾನು ಆಗ ಇನ್ಸ್‌ಪೆಕ್ಟರ್ ಮುಂದೆಯೇ ಕೇಳಿದೆ, ಯಾಕೆ ಸುಳ್ಳು ದೂರು ಕೊಡುತ್ತೀಯಾ? ಇದು ಸರೀನಾ? ಎಂದು ಕೇಳಿದೆ. ಅದಕ್ಕೆ ವಿಜಯ್ ತಾತಾ, ನನ್ನ ಮೇಲೆ ಒತ್ತಡ ಇದೆ ಎಂದು ಹೇಳಿದ ಎಂದು ರಮೇಶ್ ಗೌಡ ದೂರಿದರು.

ವಿಜಯ್ ತಾತಾ ಮೇಲೆ ಕರ್ನಾಟಕದಲ್ಲಿ ಮಾತ್ರವಲ್ಲ,; ನಾಗಪುರ, ಪುಣೆ ಮುಂಬಯಿಯಲ್ಲೂ ಪ್ರಕರಣಗಳು ದಾಖಲಾಗಿವೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು ನನ್ನ ಬಳಿ ಇವೆ. ನೂರಾರು ಎಫ್ಐಆರ್ ಗಳು ಆಗಿವೆ. ನಾನು ಮನೆಗೆ ಹೋಗಿ ದೂರವಾಣಿ ಕರೆ ಮಾಡಿಕೊಟ್ಟಿದ್ದರೆ ಸಿಸಿ ಟಿವಿ ಇದೆಯಲ್ಲ ಅದನ್ನು ತೋರಿಸಲಿ ಎಂದು ಸವಾಲು ಹಾಕಿದ ರಮೇಶ್ ಗೌಡ, ದೂರವಾಣಿಯ ವಾಯ್ಸ್ ರೆಕಾರ್ಡ್ ತೆಗಿಸಲಿ. ವಿಜಯ್ ತಾತಾ ಹಲವು ಬಾರಿ ನನಗೆ ಕರೆ ಮಾಡಿದ್ದ, ಮೆಸೆಜ್ ಕಳಿಸಿದ್ದ ಎಂದು ಅವರು ಹೇಳಿದರು.

ವಿಜಯ್ ತಾತಾ ವಂಚನೆ ಮಾಡುತ್ತಲೇ ಬಂದ ವ್ಯಕ್ತಿ. 2006-07 ಹಾಗೂ 2008ರಲ್ಲಿ ಯೂರೋಪಿಯನ್ ಟೌನ್ ಶಿಪ್ ಮಾಡಿ ಲೇಔಟ್ ಮಾಡುತ್ತೇನೆ ಅಂತಾ ಹೇಳಿದ್ದರು. ಎರಡು ಹೆಲಿಕಾಪ್ಟರ್ ತರಿಸಿ ಪೂಜೆ ಮಾಡುತ್ತಾನೆ. ಯಾವುದೇ ಲೇಔಟ್ ಗೆ ಜಮೀನು ಇಲ್ಲ ಎಂದು ಹೇಳುವ ಮೂಲಕ ಬಿಡಿಎ ಇವನ ಬಣ್ಣ ಬಯಲು ಮಾಡಿತ್ತು. ದೇವನಹಳ್ಳಿ ಬಳಿ ಅಪಾರ್ಟ್ಮೆಂಟ್ ಕಟ್ಟುತ್ತೇನೆ, ಮನೆ ತೆಗೆದುಕೊಂಡರೆ ಬೆನ್ಜ್ ಕಾರು ಕೊಡುತ್ತೇನೆ ಎಂದು ಜಾಹೀರಾತು ನೀಡಿದ್ದ. ಒಂದು ಜಮೀನನ್ನು ಮೂವರಿಗೆ ಮಾರಾಟ ಮಾಡಿದ್ದಾನೆ. ಸೋಫಾ ಶೋರೂಮ್ ತೆಗೆದು ಹಲವು ಜನರಿಗೆ ಮೋಸ ಮಾಡಿದ್ದಾನೆ ಎಂದು ಅವರು ಆರೋಪ ಮಾಡಿದರು.

ನಾನು ದೂರು ಕೊಟ್ಟರೆ ಎಫ್ಐಆರ್ ಆಗಲ್ಲ. ಆತ ದೂರು ಕೊಟ್ಟರೆ ಆಗುತ್ತದೆ. ಪೊಲೀಸ್ ಠಾಣೆ ಮುಂದೆ ಧರಣಿ ಕೂರುತ್ತೇನೆ. ನಾಳೆಯಿಂದ ಎಲ್ಲಾ ಸಚಿವರ ಮೇಲೆ ದೂರು ಕೊಟ್ಟರೆ ಎಫ್ಐಆರ್ ಸಚಿವರುಗಳ ಮೇಲೆ ಹಾಕುತ್ತಾರಾ? ಧರ್ಮಸ್ಥಳದ ಮಂಜುನಾಥ ಸ್ವಾಮಿ, ತಾಯಿ ಚಾಮುಂಡೇಶ್ವರಿ ಮೇಲೆ ಪ್ರಮಾಣ ಮಾಡುತ್ತೇನೆ. ನಾನು ವಿಜಯ್ ತಾತಾ ಬಳಿ ಯಾವುದೇ ಹಣ ಕೇಳಿಲ್ಲ. ನವರಾತ್ರಿ ನಡೆಯುತ್ತಿದೆ, ಪ್ರಮಾಣ ಮಾಡುತ್ತೇನೆ. ಯಾವುದೇ ಮನೆ ಹಾಳು ಕೆಲಸ ಮಾಡಿಲ್ಲ. ಇದೇ ವಿಜಯ್ ತಾತಾ ಹಲವು ಬಾರಿ ನನಗೆ ಕರೆ ಮಾಡಿದ್ದಾನೆ. ನನ್ನ ಪೋನ್, ಆತನ ಅವರ ಪೋನ್ ಸೀಜ್ ಮಾಡಲಿ ಎಂದು ಅವರು ಸವಾಲು ಹಾಕಿದರು.

ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ

ವಿಜಯ್ ತಾತಾ ವಿರುದ್ಧ ನಾನು ದೂರು ಕೊಟ್ಟಿದ್ದರೂ ಎಫ್ಐಆರ್ ಮಾಡದಿರುವ ಪೊಲೀಸರ ಕ್ರಮ ಖಂಡಿಸಿ ರಮೇಶ್ ಗೌಡ ಮತ್ತಿತರೆ ಮುಖಂಡರು ನಗರ ಪೊಲೀಸ್ ಆಯುಕ್ತರ ಕಚೇರಿ ಎದುರು ಧರಣಿ ನಡೆಸಿದರು.

ಪೊಲೀಸ್ ಇಲಾಖೆ ಸಹಜ ನ್ಯಾಯ ಪಾಲನೆ ಮಾಡುತ್ತಿಲ್ಲ. ಒತ್ತಡಕ್ಕೆ ಮಣಿದು ಕೆಲಸ ಮಾಡುತ್ತಿದೆ ಎಂದು ಅವರು ಆರೋಪ ಮಾಡಿದರು.

About The Author